ಇರುವೆ 
ಸಂಧಿಪದಿ ವಂಶದ ಹೈಮೆನೋಪ್ಟೆರ ಉಪವರ್ಗಕ್ಕೆ ಸೇರಿರುವ ಹಲವಾರು ಕೀಟಗಳಲ್ಲಿ ಒಂದು (ಆಂಟ್). ಎಣಿಸಿರುವ ಪ್ರಭೇದಗಳು ಸುಮಾರು 15,000. ಇರುವೆಗಳು ಸಂಘಜೀವಿಗಳು. ಇವುಗಳ ಪೂರ್ವಜರು ನೆಲದೊಳಗೆ ಗುಂಡಿ ತೋಡಿ ಗೂಡುಮಾಡಿ ಒಂಟಿಜೀವನ ನಡೆಸುತ್ತಿದ್ದಿರಬಹುದೆಂದು ನಂಬಲಾಗಿದೆ. ವಿಕಾಸಶ್ರೇಣಿಯಲ್ಲಿ ಮೊದಲ ಹಂತಗಳು ದೊರೆತಿಲ್ಲ. ಈಗ ಲಭಿಸಿರುವ ಅತ್ಯಂತ ಪ್ರಾಚೀನ ಪಳೆಯುಳಿಕೆಗಳು ಸೀನೋಜೋಯಿಕ್ ಯುಗದ ಪ್ರಾರಂಭಕಾಲದವು (65 ದಶಲಕ್ಷ ವರ್ಷ ಪ್ರಾಚೀನ). ಆದರೆ ಆ ವೇಳೆಗಾಗಲೇ ಇವುಗಳ ವಿಕಾಸ ಪೂರ್ಣವಾಗಿತ್ತು. 35,000,000 ವರ್ಷಗಳ ಹಿಂದೆ ಮರದ ಮೇಣ ಅಥವಾ ಅರಗಿನೊಳಗೆ ಸಿಕ್ಕಿಕೊಂಡು ಅಸುನೀಗಿರುವ ಇರುವೆಗಳ ಶರೀರಗಳು ಸ್ವಲ್ಪವೂ ಕೆಡದಂತೆ ಪಳೆಯುಳಿಕೆಗಳಾಗಿ ಉಳಿದಿವೆ. ಅವುಗಳ ಮತ್ತು ಇಂದಿರುವ ಇರುವೆಗಳ ಅಂಗರಚನೆ, ಶರೀರ ರಚನೆಗಳಲ್ಲಿ ಅಂಥ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ.

	ಬೆಚ್ಚಗಿನ ಗೂಡು ಇರುವೆಗೆ ಬಲುಪ್ರಿಯ. ಅಂಥ ಸ್ಥಳಗಳನ್ನೇ ಅವು ತಮ್ಮ ನಿವಾಸ ಸ್ಥಾನಗಳಿಗೆ ಆರಿಸಿಕೊಳ್ಳುತ್ತವೆ. ಉಷ್ಣವಲಯ, ಸಮಶೀತೋಷ್ಣವಲಯಗಳಲ್ಲಿ ಇರುವೆಗಳ ಪ್ರಸಾರ ಹೆಚ್ಚು. ಕೆಲವು ಮಾತ್ರ ಶೀತವಲಯದಲ್ಲೂ ಇವೆ. ಆದರೆ ತೀವ್ರ ಶೀತ ಭಾಗಗಳಲ್ಲಿ ಇರುವುದಿಲ್ಲ.

	ಇರುವೆಗಳ ನಿವಾಸ ಒಂದೊಂದು ಪ್ರಭೇದದಲ್ಲಿ ಒಂದೊಂದು ತೆರ. ಇದರ ಕಾರಣ ಸಂತಾನೋತ್ಪತ್ತಿಯ ಕ್ರಮ ಹಾಗೂ ಮರಿಗಳನ್ನು ಬೆಳೆಸುವ ವಿಧಾನ. ಇವು ತಮ್ಮ ಲಾರ್ವಗಳನ್ನು ಅವುಗಳಿಗೆಂದೇ ತಯಾರಾದ ಗೂಡುಗಳಲ್ಲಿಟ್ಟು ಮುಚ್ಚುವುದಿಲ್ಲ. ಆದ್ದರಿಂದ ಮರಿಗಳನ್ನು ಹೊತ್ತುಕೊಂಡು ಬೇಕಾದೆಡೆಗೆ ಚಲಿಸಲು ಅನುಕೂಲವಾಗಿದೆ. ಇರುವೆಗಳು ಗೂಡುಬದಲಾಯಿಸಬೇಕಾಗಿ ಬಂದಾಗ ಮರಿಗಳನ್ನು ಹೊತ್ತುಕೊಂಡು ಹೋಗುತ್ತವೆ. ಗೂಡು ಸಾಮಾನ್ಯವಾಗಿ ನೆಲದಡಿಯಲ್ಲಿರುವುದು. ಅವು ಚಿಕ್ಕ ಚಿಕ್ಕ ಬಿಲಗಳೂ ಆಗಿರಬಹುದು. ಆದರೆ ಕೆಲವು ಜಾತಿಯ ಇರುವೆಗಳು ಮರದಮೇಲೆ, ಕಲ್ಲುಗಳ ಕೆಳಗೆ, ಕಸಕಡ್ಡಿಗಳ ರಾಶಿಗಳಲ್ಲಿ ಗೂಡುಮಾಡಿಕೊಂಡು ಬಾಳುತ್ತವೆ.

	ಒಂದು ಇರುವೆಗೂಡಿನಲ್ಲಿರುವ ವರ್ಗ ಮೂರು-ಗಂಡು, ಹೆಣ್ಣು ಮತ್ತು ಕೆಲಸಗಾರ. ಇರುವೆಗಳ ಬಹಳ ಪ್ರಭೇದಗಳಲ್ಲಿ ಕೆಲಸಗಾರ ಇರುವೆ ಬಹುರೂಪಗಳನ್ನು ಹೊಂದಿರುವುದು. ಕೆಲವು ಕೆಲಸಗಾರ ಇರುವೆಗಳು ಅತಿ ದೊಡ್ಡವಾಗಿಯೂ, ಕೆಲವು ಮಧ್ಯಸ್ಥಿತಿಯಲ್ಲಿಯೂ, ಮತ್ತೆ ಕೆಲವು ಅತಿಚಿಕ್ಕವಾಗಿಯೂ ಇರುವುದು ಬಹುರೂಪತೆಯ ಲಕ್ಷಣ. ಒಂದು ಗೂಡಿನಲ್ಲಿರುವ ಮೂರು ವರ್ಗಗಳಲ್ಲೂ ಬಾಹ್ಯ ನೋಟದಲ್ಲಿ ಅತಿ ಹೆಚ್ಚಿನ ವೈವಿಧ್ಯಗಳಿವೆ, ಇವು ಒಂದೇ ಪ್ರಭೇದವೆಂದು ಗುರುತಿಸುವುದೇ ಕಷ್ಟವೆನಿಸುವಷ್ಟು ಭಿನ್ನವಾಗಿವೆ.

	ಇರುವೆಯ ಶರೀರದಲ್ಲಿ ಸಾಮಾನ್ಯವಾಗಿ ಇರುವ ಭಾಗಗಳು ತಲೆ, ಎದೆ, ಸೊಂಟ ಮತ್ತು ಉದರ. ಎದೆಯ ತಳಭಾಗದಲ್ಲಿ ಮೂರು ಜೊತೆ ಕಾಲುಗಳಿವೆ. ಸೊಂಟದ ಭಾಗ ಉದರದ ಎರಡು ಖಂಡಗಳ ಮಿಲನದಿಂದಾಗಿದೆ. ಈ ಭಾಗದಲ್ಲಿ ಒಂದು ಅಥವಾ ಎರಡು ಮಣಿಯಂಥ ಗಂಟುಗಳಿವೆ. ಹೆಣ್ಣಿನ ಉದರದ ಹಿಂತುದಿಯಲ್ಲಿ ಒಂದು ಚೂಪಾದ ಮುಳ್ಳಿನಂಥ ರಚನೆ ಇದೆ. ಮೊಟ್ಟೆಯಿಡಲು ಇದರ ಸಹಾಯ ಅವಶ್ಯ. ತಲೆಯಲ್ಲಿ ಕಣ್ಣುಗಳು ಮತ್ತು ಒಂದು ಜೊತೆ ಕುಡಿಮೀಸೆಗಳಿವೆ. ಮೊಂಡಾದ ಕುಡಿಮೀಸೆಗಳು ಕೈಗಳಂತೆ ಕಾಣುತ್ತವೆ. ಬಾಯ ಸುತ್ತಲೂ ಸೂಕ್ಷ್ಮ ಅಂಗಗಳಿವೆ.

	ಒಂದು ಪ್ರಭೇದದ ಎಲ್ಲ ಜಾತಿಯ ಇರುವೆಗಳ ಭ್ರೂಣಾವಸ್ಥೆಯ ಬೆಳೆವಣಿಗೆಯೂ ಒಂದೇ ತೆರ. ಮೊಟ್ಟೆಯೊಡೆದು ಹೊರಬಂದ ಮರಿಯ ಹೆಸರು ಲಾರ್ವ, ಇದು ಕೆಲಕಾಲ ಬೆಳೆದು ಕೋಶಾವಸ್ಥೆಯನ್ನು ತಲುಪುತ್ತದೆ. ಈ ಕಾಲದಲ್ಲಿಯೆ ಆ ಪ್ರಭೇದದ ಬಹುರೂಪಜೀವಿಗಳ ಉದಯಕ್ಕೆ ಬೇಕಾದ ಬೆಳೆವಣಿಗೆಗಳು ನಡೆಯುತ್ತವೆ. ಯಾವುದು ರಾಣಿಯಾಗಬೇಕು. ಯಾವುದು ಗಂಡಾಗಬೇಕು ಮತ್ತು ಯಾವುದು ಕೆಲಸಗಾರನಾಗಬೇಕು ಎಂಬುದು ಮೊಟ್ಟೆಸ್ಥಿತಿಯಲ್ಲೇ ತೀರ್ಮಾನವಾಗಿರುತ್ತದೆ. ಗಂಡುಗಳಾಗಿ ಬೆಳೆಯುವ ಮೊಟ್ಟೆಗಳು ಗರ್ಭಧರಿಸುವುದೇ ಇಲ್ಲ. ಆದ್ದರಿಂದ ಈ ಮೊಟ್ಟೆಗಳಲ್ಲಿ ಆ ಪ್ರಭೇದದ ವರ್ಣತಂತುಗಳ (ಕ್ರೋಮೋಸೋಮ್ಸ್) ಸಂಖ್ಯೆಯ ಅರ್ಧರಷ್ಟು ವರ್ಣತಂತುಗಳಿರುತ್ತವೆ. ಇದು ಹ್ಯಾಪ್ಲಾಯ್ಡ್ ಸ್ಥಿತಿ. ಆದರೆ ಹೆಣ್ಣುಗಳಾಗಿ ಬೆಳೆಯುವ ಮೊಟ್ಟೆಗಳು ರೇತಸ್ಸುಗಳ ಮಿಲನದಿಂದ ಗರ್ಭಧರಿಸುತ್ತವೆ. ಇವುಗಳಲ್ಲಿ ಆ ಪ್ರಭೇದದ ವರ್ಣತಂತುಗಳ ಸಂಖ್ಯೆ ಪೂರ್ಣವಾಗಿರುತ್ತದೆ. ಇದರ ಹೆಸರು ಡಿಪ್ಲಾಯ್ಡ್ ಸ್ಥಿತಿ. ಹೆಣ್ಣುಗಳ ಬೆಳವಣಿಗೆ ಎರಡು ಬಗೆಯಾಗಿ ನಡೆಯುತ್ತದೆ. ತಾಯಿತನದ ಗುಣ ಕೆಲವು ಹೆಣ್ಣುಗಳಿಗೆ ಮಾತ್ರ ಇರುವುದು. ಉಳಿದುವು ಬಂಜೆಯಂತೆ ಬೆಳೆಯುತ್ತವೆ. ತಾಯಾಗಬಲ್ಲ ಜೀವಿ ವಯಸ್ಸಿಗೆ ಬಂದಾಗ ರೆಕ್ಕೆಗಳು ಹುಟ್ಟುವುವು. ಇವು ರಾಣಿಗಳು. ಬಂಜೆಗಳಿಗೆ ರೆಕ್ಕೆ ಬೆಳೆಯುವುದಿಲ್ಲ. ಇವೇ ಕೆಲಸಗಾತಿಗಳು. ರಾಣಿಯ ಎದೆ ಮತ್ತು ಉದರ ಭಾಗಗಳು ಕೆಲಸಗಾತಿಗಳದಕ್ಕಿಂತ ಭಿನ್ನ. ಆದರೆ ಕೆಲವು ಪ್ರಭೇದಗಳಲ್ಲಿ ರೆಕ್ಕೆಗಳಿಲ್ಲದ ಹೆಣ್ಣುಗಳೂ ಹುಟ್ಟುವುದಿದೆ. ಇಂಥದಲ್ಲಿ ರಾಣಿಗೂ ಕೆಲಸಗಾತಿಗಳಿಗೂ ಶರೀರದಲ್ಲಿ ವ್ಯತ್ಯಾಸವಿರಬೇಕು. ಇದು ರೇತಸ್ಸನ್ನು ತುಂಬಿಟ್ಟುಕೊಳ್ಳಬಲ್ಲ ಚೀಲದಲ್ಲಿದೆ. ರಾಣಿಯಾಗುವ ಜೀವಿಯಲ್ಲಿ ಮಾತ್ರ ಸಂಭೋಗಕ್ರಿಯೆಯ ಕಾಲದಲ್ಲಿ ಗಂಡಿನಿಂದ ಸೂಸುವ ರೇತಸ್ಸನ್ನು ಶೇಖರಿಸಿಟ್ಟುಕೊಳ್ಳಬಲ್ಲ ಚೀಲವಿರುವುದು ಈ ಚೀಲವಿಲ್ಲದವುಗಳೇ ಕೆಲಸಗಾತಿಯರು. ಬಂಜೆಗಳಾಗಲು ಚೀಲದ ಬೆಳೆವಣಿಗೆ ಆಗದಿರುವುದೇ ಕಾರಣ. ಆದ್ದರಿಂದ ಇವು ಸಂಭೋಗಕ್ರಿಯೆಯಲ್ಲಿ ಪಾಲುಗೊಳ್ಳುವುದಿಲ್ಲ. ಇಷ್ಟಾದರೂ ಇವು ಪೂರ್ಣ ಬಂಜೆಗಳಲ್ಲ. ಇವಕ್ಕೆ ಮೊಟ್ಟೆಯಿಡುವ ಶಕ್ತಿಯೇನೋ ರಾಣಿಯಂತೆಯೇ ಇದೆ. ಈ ಮೊಟ್ಟೆಗಳು ಹ್ಯಾಪ್ಲಾಯ್ಡ್ ಸ್ಥಿತಿಯಲ್ಲಿರುತ್ತದೆ. ಇಂಥ ಮೊಟ್ಟೆಗಳು ಗರ್ಭಧರಿಸದೆ ಬೆಳೆದು ಗಂಡು ಇರುವೆಗಳನ್ನು ಕೊಡುತ್ತವೆ. ಬೇಸಗೆ ಕಾಲದಲ್ಲಿ ಪರಿಸರದಲ್ಲಿ ಉಷ್ಣತೆ ಉತ್ತಮಮಟ್ಟದಲ್ಲಿದ್ದಾಗ ರಾಣಿ ಮತ್ತು ಕೆಲಸಗಾತಿಯರಿಟ್ಟ ಮೊಟ್ಟೆಗಳು ಒಡದುಕೊಂಡು ಮರಿಗಳು ಹೊರ ಬರುತ್ತವೆ. ಕಂಬಳಿಹುಳುಗಳನ್ನು ಹೋಲುವ ಇವೇ ಲಾರ್ವಗಳು. ತಿಂದು ಬೆಳೆದು ಕೋಶಾವಸ್ಥೆ ತಲುಪಿ ಮುಂದೆ ವಯಸ್ಕಜೀವಿಗಳಾಗಿ ಇವು ಬೆಳೆಯುತ್ತವೆ.

	ಗರ್ಭ ಧರಿಸಲು ರಾಣಿ ಇರುವೆಗೆ (ಎಂದರೆ ಸಂಭೋಗಿಸಬಲ್ಲ ಹೆಣ್ಣು) ಸಂಭೋಗಕ್ರಿಯೆ ಅಗತ್ಯ. ಈ ಕಾಲದಲ್ಲಿ ಅದು ವೀರ್ಯರಸ ಮತ್ತು ರೇತಸ್ಸುಗಳನ್ನು ಗಂಡಿನಿಂದ ಪಡೆಯುತ್ತದೆ. ಆದ್ದರಿಂದ ಕನ್ಯೆಯಾಗಿರುವ ರಾಣಿ ಇರುವೆ ಗರ್ಭಧಾರಣೆಗಿಂತ ಮುಂಚೆ ಗೂಡಿನಿಂದ ಹಾರಿಹೋಗುತ್ತದೆ. ರಾಣಿ ಗಂಡು ಇರುವೆಯೊಡನೆ ಸಂಭೋಗಿಸುತ್ತ ಹಾರಾಡುತ್ತಿರುತ್ತದೆ. ಇದನ್ನು ಶೋಭನನೃತ್ಯವೆನ್ನುತ್ತಾರೆ. ಗಂಡು ತನ್ನೆಲ್ಲ ವೀರ್ಯರಸ ಹೆಣ್ಣಿನ ರೇತಸ್ಸು-ಸಂಗ್ರಹಣ ಚೀಲದೊಳಕ್ಕೆ ತುಂಬಿದಾಗ ನೃತ್ಯ ಮುಕ್ತಾಯವಾಗುವುದು. ಮುಂದೆ ಇವು ಬೇರೆ ಬೇರೆಯಾಗುತ್ತವೆ. ಗಂಡು ಸತ್ತುಹೋಗುತ್ತದೆ. ರಾಣಿ ಗಳಿಸಿಕೊಂಡ ಈ ವೀರ್ಯರಸದ ಉಪಯೋಗ ಅದರ ಜೀವಿತಕಾಲದ ಕೊನೆಯವರೆಗೂ ಮೊಟ್ಟೆಗಳ ಗರ್ಭಧಾರಣೆಗೆ ಸಾಕು. ಇವು ರಾಣಿಯ ರೇತಸ್ಸು-ಸಂಗ್ರಹಣ ಚೀಲದಲ್ಲಿ ಕೊನೆಯ ಪಕ್ಷ 15 ವರ್ಷಗಳವರೆಗಾದರೂ ಉಳಿದಿರುತ್ತವೆ. ತನ್ನ ಜೀವಿತ ಕಾಲದಲ್ಲೆಲ್ಲ ರಾಣಿ ಒಂದೇ ಸಲ ಮಾತ್ರ ಗಂಡಿನೊಡನೆ ಸಂಭೋಗಿಸುತ್ತದೆ. ಸಂಭೋಗಕ್ರಿಯೆ ಮುಗಿದ ಮರುಗಳಿಗೆಯಿಂದಲೇ ರಾಣಿ ವಿಧವೆಯಾಗಿ ಮುಂದಿನ ಪೀಳಿಗೆಯ ಉದಯದ ಕಡೆ ಗಮನಹರಿಸುತ್ತದೆ. ಆದ್ದರಿಂದ ಗೂಡುಬಿಟ್ಟು ಹಾರಿಬಂದು ಗರ್ಭಧರಿಸಿದ ರಾಣಿ ಹೊಸ ಗೂಡನ್ನು ಹುಡುಕಬೇಕಾಗುತ್ತದೆ. ಹೊಸ ಗೂಡಿನಲ್ಲಿ ತನ್ನ ಪೀಳಿಗೆಯ ಭದ್ರತೆ, ರಕ್ಷಣೆ, ಆಹಾರ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರಕಬೇಕು. ಆದ್ದರಿಂದ ರಾಣಿ ಹುಡುಕುವ ಸ್ಥಳ ಅದರ ಮತ್ತು ಮುಂದೆ ಅದರಿಂದ ಹುಟ್ಟುವ ಸಂತಾನಕ್ಕೆ ರಕ್ಷಣೆ ಕೊಡಬೇಕು. ಇಲ್ಲದಿದ್ದಲ್ಲಿ ರಾಣಿಯನ್ನೊಳಗೊಂಡು ಅದರ ಪೀಳಿಗೆಯೇ ನಿರ್ನಾಮವಾಗುತ್ತದೆ.

	ಶೋಭನನೃತ್ಯ ಮುಗಿದ ತರುವಾಯ ರಾಣಿ ನೆಲಕ್ಕಿಳಿಯುತ್ತದೆ. ಆಗ ಅದರ ರೆಕ್ಕೆಗಳು ನಷ್ಟವಾಗುತ್ತವೆ. ರೆಕ್ಕೆಗಳು ಅವಾಗಿಯೇ ಉದುರಿಹೋಗಬಹುದು. ಇಲ್ಲವೇ ರಾಣಿಯೇ ಅವನ್ನು ಕಿತ್ತುಹಾಕಬಹುದು. ದೊಡ್ಡದಾಗಿ ಬೆಳೆದು ರೆಕ್ಕೆಗಳಿಗೆ ಆಶ್ರಯ ನೀಡಿದ್ದ ಮಾಂಸಖಂಡಗಳು ಕ್ರಮೇಣ ಕರಗಿ ಕೆಲವು ಕಾಲದಲ್ಲಿ ಲಾಲಾ ಗ್ರಂಥಿಗಳಾಗಿ ಪರಿವರ್ತನೆ ಹೊಂದುತ್ತವೆ. ಇಷ್ಟರಲ್ಲಿ ರಾಣಿಯ ಅಂಡಾಶಯ ಮೊಟ್ಟೆಗಳನ್ನು ಉತ್ಪಾದಿಸಲಾರಂಭಿಸುತ್ತದೆ. ಮೊಟ್ಟೆಗಳು ಹೊರಬರುವಾಗ ಒಂದು ಮೊಟ್ಟೆಗೆ ಒಂದು ರೇತಸ್ಸಿನಂತೆ ರೇತಸ್ಸು ಸಂಗ್ರಹಣ ಚೀಲ ರೇತಸ್ಸುಗಳನ್ನು ಹೊರಹಾಕುತ್ತದೆ. ಈ ರೇತಸ್ಸಿನಿಂದ ಗರ್ಭ ಧರಿಸಿದ ಮೊಟ್ಟೆಗಳನ್ನು ರಾಣಿ ಗೂಡಿನಲ್ಲಿಡುತ್ತದೆ. ಕೆಲಕಾಲದಲ್ಲಿಯೇ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಮರಿಗಳಿಗೆ ಆಹಾರ ಒದಗಿಸುವ ಹೊಣೆ ರಾಣಿಗೇ ಸೇರಿದ್ದು. ಕೆಳದರ್ಜೆಯ ಇರುವೆಗಳಲ್ಲಿ ರಾಣಿ ತನ್ನ ಮಕ್ಕಳ ಆಹಾರಕ್ಕಾಗಿ ಗೂಡುಬಿಟ್ಟು ಹೊರಬಂದು ಆಹಾರಾನ್ವೇಷಣೆ ಮಾಡಿ ಅದನ್ನು ತೆಗೆದುಕೊಂಡು ಹೋಗಿ ಮರಿಗಳಿಗೆ ಕೊಟ್ಟು ಪೋಷಿಸುತ್ತದೆ. ವಿಕಾಸ ಹೊಂದಿದ ಮೇಲುದರ್ಜೆಯ ಇರುವೆಗಳಲ್ಲಿ ಗೂಡಿನಿಂದ ರಾಣಿ ಹೊರಬರುವುದೇ ಇಲ್ಲ. ಬದಲು ರೆಕ್ಕೆಯ ಮಾಂಸಖಂಡಗಳು ಉತ್ಪತ್ತಿ ಮಾಡುವ ಲಾಲಾರಸವನ್ನೇ ಮರಿಗಳಿಗೆ ಉಣಿಸಿ ಪೋಷಿಸಲಾರಂಭಿಸುತ್ತದೆ. ಈ ರೀತಿಯ ರಾಣಿ ಇರುವೆಗಳು ಹೊಟ್ಟೆ ಹಸಿದಾಗ ತಮ್ಮ ಮೊಟ್ಟೆಗಳನ್ನೇ ತಿನ್ನುವುದುಂಟು. ರಾಣಿ ತಿಂದುಳಿದ ಮೊಟ್ಟೆಗಳಿಂದ ಹುಟ್ಟಿದ ಮರಿಗಳು ಕೆಲಸಗಾತಿಗಳಾಗುತ್ತವೆ. ಇವುಗಳಿಗೆ ಮೊದಲು ಹುಟ್ಟಿದ ಇರುವೆಗಳಿಗೆ ದಾದಿಯರ ಪೀಳಿಗೆಯೆಂದು ಹೆಸರು. ಈ ಪೀಳಿಗೆ ಹುಟ್ಟಿ ಬಂದಮೇಲೆ ರಾಣಿಯ ಕಷ್ಟಗಳೆಲ್ಲ ಪರಿಹಾರವಾದಂತೆಯೇ, ದಾದಿ ಇರುವೆಗಳು ಗೂಡುಬಿಟ್ಟು ಹೊರಬಂದು ಆಹಾರ ಸಂಗ್ರಹಿಸಿಕೊಂಡು ಹೋಗಿ ರಾಣಿಗೆ ಮತ್ತು ಮರಿಗಳಿಗೆ ಉಣ್ಣಿಸುತ್ತವೆ. ಹೀಗೆ ಇರುವೆಯ ಗೂಡು ಪೂರ್ಣವಾಗುತ್ತದೆ. ಆಗ ರಾಣಿಗೆ ಮೊಟ್ಟೆಯಿಡುವುದೊಂದೇ ಕೆಲಸ. ಈ ಕೆಲಸ 10-15 ವರ್ಷಗಳ ಕಾಲ ನಿರಂತರವಾಗಿ ನಡೆಯುತ್ತದೆ.

	ಇರುವೆಯ ಸಂಘಜೀವನದ ರಹಸ್ಯವೇನು ಎಂಬ ಪ್ರಶ್ನೆಗೆ ಗೂಡಿನಲ್ಲಿ ಬೆಳೆಯುತ್ತಿರುವ ಎಳೆಯ ಜೀವಿಗಳ ಮೇಲಿನ ವ್ಯಾಮೋಹಕ್ಕಿಂತ ಆ ಎಳೆಯ ಜೀವಿಗಳ ಶರೀರದಲ್ಲಿರುವ ಬೆವರಿನಂಥ ವಸ್ತುವೇ ಕಾರಣವೆಂದು ಸಂಶೋಧನೆಗಳು ತಿಳಿಸುತ್ತವೆ. ಏಕೆಂದರೆ ಮಕ್ಕಳ ಮೇಲಿನ ವ್ಯಾಮೋಹವಿದ್ದರೆ ರಾಣಿ ತನ್ನ ಮೊಟ್ಟೆಗಳನ್ನೇ ತಿಂದು ಬದುಕುತ್ತಿರಲಿಲ್ಲ. ದಾದಿಗಳು ಅಥವಾ ಕೆಲಸಗಾತಿಗಳು ಮರಿಗಳನ್ನು ಎತ್ತಿ ಇಳಿಸಿ ಆಹಾರ ಒದಗಿಸಲು ಕಾರಣ ಈ ಮರಿಗಳ ಚರ್ಮದ ಮೇಲೆ ಉತ್ಪತ್ತಿಯಾಗುವ ಸಿಹಿಯಾದ ರಸ. ಕೆಲಸಗಾತಿಗಳು ಹೊರಗಿನಿಂದ ತಂದ ಆಹಾರವನ್ನು ಆ ಮರಿಗಳಿಗೆ ಉಣಿಸಿ ತಾವು ಅವುಗಳ ಮೈಮೇಲಿರುವ ಸಿಹಿರಸವನ್ನು ಹೀರುತ್ತವೆ. ಈ ವಿಧಾನವನ್ನು ಟ್ರೊಫಲ್ಯಾಕ್ಸಿಸ್ ಎನ್ನುತ್ತಾರೆ. ಇದೇ ಇರುವೆಗಳನ್ನು ಸಂಘಜೀವಿಗಳಾಗಿರುವಂತೆ ಮಾಡುವ ಸ್ನೇಹಬಂಧನ.

	ಸೆರಬ್ರ ಎಂಬ ಇರುವೆಯ ಜಾತಿಯಲ್ಲಿ ರಾಣಿ ತನ್ನ ಮರಿಗಳಿಗಿಂತ 2,000 ದಷ್ಟು ದೊಡ್ಡದು. ಇದು ತನ್ನ ಶೋಭನನೃತ್ಯವನ್ನು ಪ್ರಾರಂಭಿಸುವುದಕ್ಕೆ ಮುಂಚೆ ಅದರ ಶರೀರದ ರೋಮಗಳನ್ನು ಕೆಲವು ಕೆಲಸಗಾರ ಇರುವೆಗಳು ಭದ್ರವಾಗಿ ತಮ್ಮ ದವಡೆಗಳಿಂದ ಹಿಡಿದುಕೊಳ್ಳುತ್ತವೆ. ಇವು ಈ ರಾಣಿ ಎಲ್ಲೆಲ್ಲಿ ಹರಿಹೋಗುವುದೋ ಅಲ್ಲೆಲ್ಲ ಅದಕ್ಕಂಟಿಕೊಂಡೇ ಚಲಿಸುತ್ತವೆ. ರಾಣಿಯೊಡನೆ ಸಂಭೋಗಿಸುತ್ತಿರುವ ಗಂಡಿನ ಶರೀರದ ರೋಮಗಳಿಗೂ ಕೆಲವು ಕೆಲಸಗಾರರು ಅಂಟಿಕೊಂಡಿರುವುದುಂಟು. ಆದರೆ ರಾಣಿ, ಸಂಭೋಗಕ್ರಿಯೆ ಮುಗಿದ ಮೇಲೆ ಗಂಡನನ್ನು ಬಿಟ್ಟು ಹಾರಿಹೋಗುತ್ತದೆ. ಗಂಡಿನ ಮೈಗೆ ಅಂಟಿಕೊಂಡಿದ್ದ ಕೆಲಸಗಾತಿಗಳು ಅದರೊಡನೆಯೇ ಆಹಾರವಿಲ್ಲದೆ ಅಸುನೀಗುತ್ತವೆ. ಆದರೆ ರಾಣಿಯನ್ನು ಹಿಡಿದುಕೊಂಡಿದ್ದ ಕೆಲಸಗಾತಿಗಳು ಅದು ಮೊಟ್ಟೆಯಿಡಲಾರಂಭಿಸಿದಾಗ ಅದರ ಪಾಲನೆಯಲ್ಲಿ ತೊಡಗುತ್ತವೆ. ಈ ಜಾತಿಯಲ್ಲಿ ರಾಣಿಗೆ ತನ್ನ ಮರಿಗಳ ಶರೀರದಲ್ಲಿ ಉತ್ಪತ್ತಿಯಾಗುವ ಸಿಹಿರಸವನ್ನು ಹೀರಲು ಆಗುವುದಿಲ್ಲ ಅದರ ಗಾತ್ರ ಆ ಕ್ರಿಯೆಗೆ ಅಡ್ಡಿಬರುತ್ತದೆ. ಚಿಕ್ಕ ಚಿಕ್ಕ ಕೆಲಸಗಾರರು ಮರಿಗಳ ಶರೀರದಿಂದ ಹೊರಬರುವ ರಸವನ್ನು ತಿಂದುಕೊಂಡು ಗೂಡುಗಟ್ಟುವ ಹಾಗೂ ಮರಿಗಳನ್ನು ಪಾಲಿಸುವ ಕೆಲಸ ಮಾಡುತ್ತವೆ.

	ಫಾರ್ಮಿಕ, ಬೋಥ್ರಿಯೋಮಿರ್ ಮೆಕ್ಸ್ ಮುಂತಾದ ಇರುವೆ ಜಾತಿಗಳ ರಾಣಿ ಅತಿ ಚಿಕ್ಕದು. ತನ್ನ ಕೆಲಸಗಾತಿಗಳಿಗಿಂತಲೂ ಕಿರಿದು. ಇಂಥ ರಾಣಿಯ ರೆಕ್ಕೆಗಳ ಮಾಂಸಖಂಡಗಳಲ್ಲಿ ಉತ್ಪತ್ತಿಯಾಗುವ ಲಾಲಾರಸ ಅದರ ಮರಿಗಳಿಗೆ ಸಾಕಾಗುವುದಿಲ್ಲ. ಈ ರಾಣಿ ಕೆಲಸಗಾತಿಯರೊಡನಿದ್ದಾಗ ಗುರುತಿಸುವುದೂ ಕಷ್ಟವೆ. ಇದು ಇನ್ನಾವುದೋ ಇರುವೆಯ ಗೂಡಿಗೆ ಮೆಲ್ಲಗೆ ನುಸುಳಿಕೊಂಡು ಆಶ್ರಯದಾತನ ಗೂಡಿನಲ್ಲಿ ತಲೆಮರೆಸಿಕೊಂಡು ಇರುವುದಿದೆ. ಈ ಕಾಲದಲ್ಲೇನಾದರೂ ಆ ಗೂಡಿನಲ್ಲಿರುವ ಕೆಲಸಗಾತಿಯ ಕೈಗೆ ಇದು ಸಿಕ್ಕಿಹಾಕಿಕೊಂಡರೆ ಸತ್ತಂತೆಯೇ ಸರಿ. ಅವುಗಳ ಕಣ್ಣು ತಪ್ಪಿಸಿ ರಾಣಿ ಮೊಟ್ಟೆಯಿಡಲಾರಂಭಿಸುತ್ತದೆ. ಈ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಆಶ್ರಯದಾತ ಜೀವಿಯ ಗೂಡಿನಲ್ಲಿರುವ ಕೆಲಸಗಾತಿಯರೇ ಸಲಹುತ್ತಾರೆ. ಹೀಗೆ ಇದರ ಪೀಳಿಗೆ ಹುಟ್ಟಿಬರುತ್ತದೆ. ಇದರಿಂದಾಗಿ ಕೆಲವೊಂದು ಬಾರಿ ಇರುವೆಯ ಗೂಡಿನಲ್ಲಿ ಎರಡು ವಿಭಿನ್ನ ವೈe್ಞÁನಿಕ ಜಾತಿಯ ಇರುವೆಗಳು ಜೊತೆಜೊತೆಯಾಗಿರುತ್ತವೆ. ಆಗಂತುಕ ರಾಣಿ ಹೊಸಪೀಳಿಗೆಯ ಸಹಾಯದಿಂದ ಅಲ್ಲಿಯ ರಾಣಿಯನ್ನು ಕೊಂದು ಆ ಗೂಡನ್ನೇ ತನ್ನದಾಗಿ ಮಾಡಿಕೊಳ್ಳಬಹುದು. ಬೋಥ್ರಿಯೋಮಿರ್ ಮೆಕ್ಸ್ ಜಾತಿಯ ರಾಣಿ ಆಶ್ರಯ ಕೊಟ್ಟ ಗೂಡಿನ ರಾಣಿಯ ಬೆನ್ನಿನ ಮೇಲೆ ಹತ್ತಿ ಅದರ ಕುತ್ತಿಗೆಯನ್ನು ತನ್ನ ದವಡೆಗಳಿಂದ ಕಡಿದುಹಾಕುವುದುಂಟು. ರಾಣಿ ಸತ್ತ ಮೇಲೆ ಅದರಿಂದ ಹುಟ್ಟಿದ್ದ ಕೆಲಸಗಾತಿಗಳು ಸತ್ತು ಹೋಗುತ್ತವೆ. ಆದರೆ ಬದುಕಿರುವವರೆಗೆ ಅವು ಆಗಂತುಕ ರಾಣಿಯ ಮಕ್ಕಳ ಪಾಲನೆ ಮಾಡುತ್ತವೆ.

	ಗುಲಾಮಗಿರಿ ಕೂಡ ಇರುವೆಯ ಜೀವನದಲ್ಲಿ ಕಂಡುಬರುವುದು ಚೋದ್ಯದ ಸಂಗತಿ. ಷಾಲಿಯೆಕ್ಸೆಸ್ ಹರ್ ಪಗೊಕ್ಸಿನಸ್, ಸ್ಟ್ರಾಂಗೈಲೊನ್ಯಾಥಸ್, ಫಾರ್ಮಿಕ ಮತ್ತು ಲೆಪ್ಟೊಥೊರ್ಯಾಕ್ಸ್ ಜಾತಿಗಳಲ್ಲಿ ರಾಣಿಗಳು ತಮ್ಮ ಕ್ರೌರ್ಯಕ್ಕೆ ಹೆಸರಾಗಿವೆ. ಈ ರಾಣಿ ಇರುವೆಗಳು ಇತರರ ಗೂಡನ್ನು ಪ್ರವೇಶಿಸುತ್ತವೆ. ಇಂಥ ಅತಿಕ್ರಮ ಪ್ರವೇಶಕ್ಕೆ ಅಡ್ಡಿ ತರುವ ಇರುವೆಗಳಿಗೆ ಮರಣವೇ ಗತಿ. ಇದರಿಂದಾಗಿ ಆಶ್ರಯ ಕೊಡುವ ಗೂಡಿನ ಕೆಲಸಗಾರರು ತಮ್ಮ ರಕ್ಷಣೆ ಹಾಗೂ ತಮ್ಮ ಗೂಡಿನ ರಕ್ಷಣೆಯಲ್ಲಿ ತೊಡಗುತ್ತವೆ. ಆದರೆ ರಾಣಿ ಅವನ್ನು ರಕ್ಷಣಾಕಾರ್ಯದಲ್ಲಿರಬಿಡದೆ ಧ್ವಂಸ ಮಾಡಲು ಉಪಕ್ರಮಿಸುತ್ತದೆ. ಹೀಗೆ ಹಳೆಯಗೂಡಿನ ಮಾಲಿಕರನ್ನೆಲ್ಲ ಕೊಲ್ಲುತ್ತದೆ. ಆದರೆ ಆ ಗೂಡಿನಲ್ಲಿ ಹಳೆಯರಾಣಿ ಇಟ್ಟಿದ್ದ ಮೊಟ್ಟೆಗಳು ಉಳಿದು ಮರಿಗಳಾಗುತ್ತವೆ. ಆ ಮರಿಗಳು ಬೆಳೆದಾಗ ಈ ರಾಣಿಗೆ ಸೇವಕರಾಗುತ್ತವೆ. ಹಳೆಯ ರಾಣಿಯ ಸಂತತಿ ಹಾಗೂ ಹೊಸ ರಾಣಿಯ ಸಂತತಿ ಎರಡರ ಉದಯವಾಗಿ ದೊಡ್ಡ ಸಂಗ್ರಾಮವೇ ನಡೆಯುತ್ತದೆ. ಈ ಸಂಗ್ರಾಮದಲ್ಲಿ ಯಾವುದು ಮೇಲುಗೈ ಪಡೆಯುತ್ತದೊ ಅದು ಬದುಕುತ್ತದೆ. ಕೆಲವೊಂದು ಬಾರಿ ಸೋಲುಗೈಯಾದ ಇರುವೆಗಳು ತಮ್ಮ ಮಕ್ಕಳು ಮರಿಯನ್ನೆಲ್ಲ ಒಂದುಗೂಡಿಸಿಕೊಂಡು ಆ ಜಾಗವನ್ನೇ ಬಿಟ್ಟು ಹೊರಡುತ್ತವೆ. ಜಾಗಬಿಟ್ಟ ಇವು ಹೊಸಗೂಡು ಕಟ್ಟಿಕೊಂಡು ತಮ್ಮ ಸಂತಾನವನ್ನು ಮುಂದುವರಿಸುತ್ತವೆ.

	ಇರುವೆಗಳು ಬಾಯಿಂದ ಬಾಯಿಗೆ ಆಹಾರ ತೆಗೆದುಕೊಳ್ಳಬೇಕಾದರೆ ಅದು ದ್ರವ ಸ್ಥಿತಿಯಲ್ಲಿರಬೇಕು. ಹೀಗಿರುವ ರಸವನ್ನು ದೊಡ್ಡ ಇರುವೆಗಳು ಮರಿಗಳಿಗೆ ಉಣಿಸುವುದು ಸುಲಭ. ವಿಕಾಸದ ದೃಷ್ಟಿಯಿಂದ ಈ ರೀತಿಯ ದ್ರವಸ್ಥಿತಿ ಆಹಾರ ಸೇವನೆ ಮಾಡುವ ಇರುವೆಗಳು ಉತ್ತಮಮಟ್ಟದವೆಂತಲು ಪರಿಗಣಿಸಲಾಗಿದೆ. ಘನರೂಪದ ಆಹಾರವಸ್ತುಗಳನ್ನು ತೆಗೆದುಕೊಳ್ಳುವ ಇರುವೆಗಳು ಕೆಳಮಟ್ಟದ ಜೀವಿಗಳು. ರಸಸ್ಥಿತಿಯ ಆಹಾರವನ್ನು ಮರಿಗಳಿಗೆ ಸುಲಭವಾಗಿ ಉಣಿಸಬಹುದು. ಹೂವಿನಲ್ಲಿ ಉತ್ಪತ್ತಿಯಾಗುವ ಮಧು, ಗಿಡಗಳ ತಿಗಣೆಗಳ ಶರೀರದಲ್ಲಿ ಉತ್ಪತ್ತಿಯಾಗುವ ಸಿಹಿರಸ ಮತ್ತು ಹಣ್ಣುಗಳ ರಸ ಮುಂತಾದುವು ಇರುವೆಗಳ ಪ್ರೀತಿಯ ಆಹಾರ. ಕೆಲಸಗಾರ ಇರುವೆಗಳು ತಾವು ಕುಡಿದ ಆಹಾರವನ್ನು ತಮ್ಮ ಜೀರ್ಣಾಂಗದ ಒಂದು ಪ್ರತ್ಯೇಕ ಭಾಗವಾದ ಪ್ರೊವಂಟ್ರೆಕುಲಸ್‍ನಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಗೂಡಿಗೆ ಬುಡ ತತ್ ಕ್ಷಣ ಈ ಆಹಾರವನ್ನು ಪುನಃ ಬಾಯಿಗೆ ತೆಗೆದುಕೊಂಡು ಮರಿಗಳಿಗೆ ಉಣ್ಣಿಸುತ್ತವೆ. ಆಹಾರವನ್ನು ಬಾಯಿಗೆ ತೆಗೆದುಕೊಳ್ಳುವಾಗ ಇವುಗಳ ಜೀರ್ಣಾಂಗದಲ್ಲಿ ವಾಂತಿಯಂಥ ಕ್ರಿಯೆಗಳು ನಡೆಯುತ್ತವೆ. ಹೀಗೆ ವಾಂತಿಯಾದ ಆಹಾರವನ್ನು ಮರಿಗಳು, ದೊಡ್ಡವು ಎಲ್ಲವೂ ಉಪಯೋಗಿಸಬಹುದು.

	ಆಹಾರ ಶೇಖರಣೆಗಾಗಿಯೇ ಪ್ರತ್ಯೇಕ ಇರುವೆಗಳು ಕೆಲವು ಜಾತಿಯಲ್ಲಿವೆ. ಕಾಂಪೊಗೋಟಸ್ಸ್ ಮಿರ್ಮೆಕೋಸಿಸಟಸ್, ಲೆಪ್ಪಟೊಮಿರ್ಮೆಕ್ಸ್ ಮುಂತಾದ ಪ್ರಭೇದಗಳ ಇರುವೆಗಳಲ್ಲಿ ಆಹಾರ ಶೇಖರಣೆಗಾಗಿಯೇ ಪ್ರತ್ಯೇಕ ಇರುವೆಗಳಿವೆ. ಇವನ್ನು ಆಹಾರದ ಕಣಜಗಳೆನ್ನುತ್ತಾರೆ. ಇವು ಕೆಲಸಗಾತಿಗಳು. ಈ ಇರುವೆಗಳ ಜೀರ್ಣಾಂಗ ಭಾಗವಾದ ಮ್ಯಾತೆ ಅತಿ ದೊಡ್ಡ ಚೀಲದಂತಾಗಿ ಆಹಾರವನ್ನು ಶೇಖರಿಸುತ್ತದೆ. ಬೇರೆ ಕೆಲಸಗಾತಿ ಇರುವೆಗಳು ತಾವು ತಿಂದ ಆಹಾರವನ್ನೆಲ್ಲ ತಂದು ಇದರ ಬಾಯಿಗೆ ವಾಂತಿ ಮಾಡುತ್ತವೆ. ಎಲ್ಲ ಇರುವೆಗಳ ಆಹಾರ ರಸಗಳನ್ನು ಈ ಇರುವೆ ಕುಡಿದು ಅದನ್ನು ಮ್ಯಾತೆಯಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಈ ರೀತಿ ಆಹಾರ ಶೇಖರಣೆ ಮಾಡಿರುವ ಇರುವೆಯ ಶರೀರ ಒಂದೊಂದು ಬಾರಿ ಅವರೆ ಕಾಳಿಗಿಂದ ದಪ್ಪವಾಗಿರುತ್ತದೆ. ಇದರೊಳಗೆ ಜೇನಿನಂಥ ರಸ ತುಂಬಿರುವುದು. ಕೆಲವೊಂದು ಬಾರಿ ಇದು ಒಡೆದೇ ಹೋಗುತ್ತದೇನೊ ಎನ್ನುವಷ್ಟು ಬಿಗಿಯಾಗಿರುವುದುಂಟು. ಇಂಥ ಇರುವೆಗಳು ಚಲಿಸಲಾರವು. ಗೂಡಿನ ಕೆಲವು ಪ್ರತ್ಯೇಕ ಭಾಗಗಳ ಮೇಲ್ಚಾವಣಿಗೆ ಇವು ಅಂಟಿಕೊಂಡು ಕುಳಿತುಕೊಳ್ಳುತ್ತವೆ. ಗೂಡಿನ ಇತರ ಜೀವಿಗಳಿಗೆ ಆಹಾರ ಬೇಕಾದಾಗ ಇಂಥ ಒಂದು ಇರುವೆಯಲ್ಲಿಗೆ ಹೋಗಿ ವಾಂತಿ ಮಾಡುವಂತೆ ಕೇಳಿಕೊಳ್ಳುತ್ತವೆ. ಆ ಇರುವೆಗಳು ಕೆಲಸಕ್ಕೆ ಹೊರಡುತ್ತವೆ.

	ಇರುವೆಗಳು ಸ್ರವಿಸುವ ಪ್ರಾಣಿಗಳನ್ನು ಸಾಕುವುದರಲ್ಲಿ ಪ್ರಖ್ಯಾತಿಹೊಂದಿದೆ. ಕೆಲವು ಜಾತಿಯ ಇರುವೆಗಳು ಗಿಡಗಳಲ್ಲಿರುವ ತಿಗಣೆಗಳನ್ನು ತಂದು ತಮ್ಮ ಗೂಡಿನಲ್ಲಿ ಸಾಕುತ್ತವೆ. ಹೀಗೆ ತರುವಾಗ ತಿಗಣೆಗಳು ಅಂಟಿಕೊಂಡಿರುವ ಎಲೆ ಅಥವಾ ಕಾಂಡಸಹಿತ ಸಾಗಿಸಿ ಗೂಡಿನಲ್ಲಿಟ್ಟುಕೊಳ್ಳುತ್ತವೆ. ತಿಗಣೆಗಳಿಗೆ ಬೇಕಾದ ಹೊಸ ಹೊಸ ಎಲೆ ಮತ್ತು ಕಾಂಡಗಳನ್ನು ಕೆಲಸಗಾರ ಇರುವೆಗಳು ಪ್ರತಿನಿತ್ಯವೂ ತಂದು ಹಾಕುವುವು. ಈ ಆಹಾರವನ್ನು ಸೇವಿಸಿಕೊಂಡು ತಿಗಣೆಗಳು ಬೆಳೆಯುತ್ತವೆ. ಇರುವೆಗೆ ಆಹಾರ ಬೇಕೆಂದಾಗ ಅದು ತಿಗಣೆಯ ಬೆನ್ನನ್ನು ಮೆಲ್ಲಗೆ ತಟ್ಟುತ್ತದೆ. ಈ ಕ್ರಿಯೆಯಿಂದ ಪ್ರಚೋದಿತವಾದ ತಿಗಣೆ ಸಿಹಿರಸವನ್ನು ಬೆನ್ನಿನ ಮೇಲೆ ಸ್ರವಿಸುತ್ತದೆ. ಅದನ್ನು ಹೀರಿಕೊಂಡು ಇರುವೆ ಬದುಕುತ್ತದೆ. ಆದ್ದರಿಂದ ಇಂಥ ತಿಗಣೆಗಳು ಇರುವೆಗಳಿಗೆ ಕರೆವ ಹಸು ಇದ್ದಂತೆ.

	ತೋಟಗಾರ ಇರುವೆಯದು ಮತ್ತೊಂದು ರೀತಿಯ ಜೀವನ. ಮರ್‍ಮಿಸೈನ್ ಗುಂಪಿನ ಇರುವೆಗಳು ಕೆಲವು ಜಾತಿಯ ಸೊಪ್ಪನ್ನು ತಮ್ಮ ಗೂಡುಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಗೂಡಿನ ಈ ಭಾಗ ವಿಶಾಲವಾಗಿರುತ್ತದೆ. ಸೊಪ್ಪಿನಲ್ಲಿ ಬೆಳೆಯುವ ಒಂದು ಜಾತಿಯ ಬೂಷ್ಟು ಇರುವೆಗಳಿಗೆ ಆಹಾರ.

	ಭಾರತದ ಸುಗ್ಗಿ ಇರುವೆಗಳು ರಾಗಿ, ಬತ್ತ, ಜೋಳದ ಕಾಳುಗಳನ್ನು ಸಿಪ್ಪೆ ತೆಗೆದು ಶೇಖರಿಸುತ್ತವೆ. ತೇವದಿಂದ ಈ ಕಾಳುಗಳು ಮೊಳೆಯಲಾಗದಂತೆ ಕಾಳುಗಳ ಭ್ರೂಣಗಳನ್ನು ಬೇಳೆಗಳಾಗುವಂತೆ ಒಡೆದು ತುಂಬಿಕೊಳ್ಳುವುದುಂಟು. ಕಾಳುಗಳು ತೇವಗೊಂಡರೆ ಅವನ್ನು ಗೂಡಿನಿಂದ ಹೊರತಂದು ಬಿಸಿಲಿನಲ್ಲಿ ಒಣಗಿಸಿ ಮತ್ತೆ ಗೂಡಿನೊಳಕ್ಕೆ ಕೊಂಡೊಯ್ಯುತ್ತವೆ.

	ಬ್ರೆಜಿಲ್ ದೇಶದ ಕೆಲವು ಇರುವೆಗಳು ಮಾಂಸಾಹಾರಕ್ಕೆ ಪ್ರಖ್ಯಾತವಾಗಿವೆ. ಇವು ಹುಲಿಸಿಂಹಗಳಂತೆ ತಮಗೆ ಆಹಾರವಾಗಬಲ್ಲ ಪ್ರಾಣಿಯನ್ನು ಹುಡುಕಿ, ಮುತ್ತಿಗೆ ಹಾಕಿ ಕೊಂದು ತಿನ್ನುವುವು. ಗುಂಪಿನಲ್ಲಿ ಎಣಿಸಲಾಗದಷ್ಟು ಇರುವೆಗಳಿರುತ್ತವೆ. ಒಟ್ಟು ಸಮುದಾಯ ಸಾಲಾಗಿ ಹರಿಯುತ್ತಿರುವಂಥ ಯಾತ್ರೆಯ ಕಾಲದಲ್ಲಿ ಯಾವುದಾದರೂ ಪ್ರಾಣಿ ಅಡ್ಡಬಂದರೆ ಅದು ಮುಗಿದಂತೆಯೇ ಸರಿ. ಹಾವುಗಳು ಸಾಮಾನ್ಯವಾಗಿ ಇರುವೆಗಳಿಗೆ ಆಹಾರವಾಗುತ್ತವೆ. ಇರುವೆಗಳು ಮುತ್ತಿಕೊಂಡರೆ ಹಾವಿನ ಮೂಳೆ ಮಾತ್ರ ಉಳಿಯುತ್ತದೆ.

	ಭಾರತದ ಕೆಂಜಿಗ ಭಯಂಕರವಾಗಿ ಆಕ್ರಮಣ ಮಾಡುತ್ತದೆ. ಕೆಂಜಿಗಗಳು, ಮರದ ಇರುವೆಗಳು ತೆಂಗಿನಮರ, ಮಾವಿನಮರದಲ್ಲಿ ಹೆಚ್ಚು. ತೆಂಗಿನಮರದ ಗರಿಗಳನ್ನು ಒಟ್ಟುಗೂಡಿಸಿ ಗೂಡು ನೇಯ್ದು ಅದರೊಳಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಗೂಡುಕಟ್ಟುವಾಗ ಎಲೆಗಳ ಅಂಚನ್ನು ಕೆಲಸಗಾರ ಇರುವೆಗಳು ಸರಿಯಾಗಿ ಹಿಡಿದು ನಿಲ್ಲುತ್ತವೆ. ಈ ಎಲೆಗಳನ್ನು ಅಂಟಿಸಬಲ್ಲ ರೇಷ್ಮೆಯಂಥ ವಸ್ತುವನ್ನು ಮರಿಗಳು ಉತ್ಪಾದಿಸುತ್ತವೆ. ಕೆಲವು ಕೆಲಸಗಾರ ಇರುವೆಗಳು ಮರಿಗಳನ್ನು ಎತ್ತಿಕೊಂಡು ಆ ಎಲೆಯ ಮೇಲೆ ಹಿಂದಕ್ಕೆ ಮುಂದಕ್ಕೆ ಓಡಾಡುತ್ತಿರುತ್ತವೆ. ಮರಿ ಸುರಿಸಿದ ಅಂಟಿನಿಂದ ಎಲೆ ಅಂಟಿಕೊಳ್ಳುತ್ತದೆ. (ನೋಡಿ- ಕೆಂಜಿಗ)

	ಗೊದ್ದ (ನೋಡಿ- ಗೊದ್ದ) ಅಥವಾ ದೈತ್ಯ ಕರೀ ಇರುವೆಗಳೂ ಮರದ ಮೇಲೆಯೇ ವಾಸಿಸುತ್ತವೆ. ಆದರೆ ಅವುಗಳ ಗೂಡು ಮಾತ್ರ ಮರದ ಬುಡದಲ್ಲಿರುತ್ತದೆ.

	ಈ ರೀತಿಯ ಕರೀ ಇರುವೆಯ ಜಾತಿಯಲ್ಲಿ ಕಟ್ಟಿರುವೆಗಳು ಭಯಂಕರ ಜೀವಿಗಳು. ಇವು ಕಚ್ಚಿದಾಗ ಒಂದು ರೀತಿಯ ವಿಷಪದಾರ್ಥವನ್ನು ಹೊರಬಿಡುತ್ತವೆ. ಆದ್ದರಿಂದ ಇವು ಕಚ್ಚಿದ ಜಾಗದಲ್ಲಿ ಕಡಿತ ಹಾಗೂ ಊತ ಬರುವುದುಂಟು.

	ಒಟ್ಟಿನಲ್ಲಿ ಇರುವೆಗಳು ಅತಿ ಚತುರ ಸಂಘಜೀವಿಗಳು. ಮಾನವ ಇವುಗಳಿಂದ ಕಲಿಯಬೇಕಾದ್ದು ಇನ್ನೂ ಇದೆ.												  
(ಎಲ್.ಎಸ್.ಜಿ.)
ಪರಿಷ್ಕರಣೆ: ಸುನಿಲ್ ಕುಮಾರ್ ಎಂ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ